ಷೀಡ್, ಆಂದ್ರೆ
	1869-1951. ಫ್ರೆಂಚ್ ಲೇಖಕ. ನವ್ಯವಿಚಾರವಾದಿ, ಮನೋವಿಜ್ಞಾನಿ, ಗದ್ಯಶಿಲ್ಪಿ, ನೊಬೆಲ್ ಪ್ರಶಸ್ತಿ ಪುರಸ್ಕøತ. 1869ರಲ್ಲಿ ಪ್ಯಾರಿಸ್‍ನಲ್ಲಿ ಜನಿಸಿದ. ತಂದೆ ಕಾನೂನು ಪ್ರಾಧ್ಯಾಪಕ. ತಾಯಿ ನಾರ್ಮಂಡಿಯ ಶ್ರೀಮಂತ ಮನೆತನದವಳು. ಇವನ ಹಿರಿಯರು ಮೊದಲು ಕ್ಯಾಥೋಲಿಕರಾಗಿದ್ದು ಅನಂತರ ಪ್ರಾಟೆಸ್ಟೆಂಟರಾದವರು. ನೇಮನಿಷ್ಠೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದ ಕುಟುಂಬದ ಸುಸಂಸ್ಕøತ ವಾತಾವರಣದಲ್ಲಿ ಇವನು ಬೆಳೆದ. ಇವನು ಹನ್ನೊಂದು ವರ್ಷದವನಿದ್ದಾಗಲೇ ತಂದೆ ನಿಧನನಾದ. ಬಾಲ್ಯದಿಂದಲೇ ಕಂದಾಚಾರಗಳ ವಿರುದ್ಧ ಸಿಡಿದೇಳುವ ಪ್ರವೃತ್ತಿ ಇವನದಾಗಿತ್ತು. ದೇಹದ ಸ್ಥಿತಿಯೂ ಬಹಳ ಸೂಕ್ಷ್ಮವಾಗಿತ್ತು. ಈ ಕಾರಣಗಳಿಂದ ಕ್ರಮಬದ್ಧ ವಿದ್ಯಾಭ್ಯಾಸ ಇವನಿಗೆ ನಡೆಯಲಿಲ್ಲ. ರಜೆಯ ದಿನಗಳಲ್ಲಿ ನಾರ್ಮಂಡಿಯಲ್ಲಿ ಹೆಚ್ಚುಕಾಲ ಕಳೆಯುತ್ತಿದ್ದ. ಅಲ್ಲಿನ ಸುತ್ತಲ ನಿಸರ್ಗ ರಮಣೀಯ ದೃಶ್ಯಗಳು, ಸನ್ನಿವೇಶಗಳು, ಅನುಭವಗಳು ಮುಂದೆ ಈತ ಬರೆದ ಕಾದಂಬರಿಗಳಿಗೆ ಸಾಮಗ್ರಿಯಾದವು.

	ಸಂಕೇತವಾದದ ಪ್ರವರ್ತಕರೆನಿಸಿದ್ದ ಸ್ಟೀಫನ್ ಮಲಾರ್ಮೆ ಮತ್ತು ಪಾಲ್‍ವೆಲೇರಿ ಇವರ ಸಂಪರ್ಕದಿಂದ ಹೆಚ್ಚು ಪ್ರಭಾವಿತನಾದ. ತನ್ನ ಕೃತಿಗಳಲ್ಲಿ ಸಾಂಕೇತಿಕತೆಯ ಎಲ್ಲ ಲಕ್ಷಣಗಳನ್ನೂ ಅನುಸರಿಸಿದ್ದಾನೆ. ಇವನ ಮೊದಲ ಕವನ ಸಂಕಲನ ಕಾಹೀರ್ ದ ಆಂಡ್ರೆವಾಲ್ಟರ್ (1891). ಇದರ 2ನೆಯ ಸಂಪುಟದ ಪೊಯಮ್ಸ್ ಆಫ್ ಆಂಡ್ರೆವಾಲ್ಟರ್‍ನ ಕವನಗಳಲ್ಲಿ ಆತ್ಮಕಥನಾಂಶಗಳು ಹೇರಳವಾಗಿವೆ. 1893ರಲ್ಲಿ ಉತ್ತರ ಆಫ್ರಿಕ ಪ್ರವಾಸ ಕೈಗೊಂಡಿದ್ದಾಗ ಕಾಯಿಲೆ ಬಿದ್ದು ಬದುಕು-ಸಾವುಗಳೊಂದಿಗೆ ಹೋರಾಡಬೇಕಾಯಿತು. ಆ ಹೊತ್ತಿನಲ್ಲಿ ಬದುಕುಳಿದ ಇವನಿಗೆ ಬದುಕು ಬಹಳ ಸುಂದರವೆನಿಸಿತು. ಇವನ ನೌರಿಚರ್ಸ್ ಡೆರ್ರೆಸ್ಟ್ರಿಸ್ ಕಾವ್ಯ ಈ ಅನುಭವಗಳನ್ನು ಚಿತ್ರಿಸುತ್ತದೆ. ಇಂದ್ರಿಯ ಸುಖಗಳೊಂದನ್ನೂ ಬಿಡದೆ ಬಾಳನ್ನು ಸಂಪೂರ್ಣವಾಗಿ ಸವಿಯುವುದ ರಲ್ಲೇ ಜೀವನದ ಸಾರ್ಥಕತೆ ಇದೆ ಎಂದು ಈತ ಗಾಢವಾಗಿ ತಿಳಿದ. 1894ರಲ್ಲಿ ಮತ್ತೊಮ್ಮೆ ಉತ್ತರ ಆಫ್ರಿಕಕ್ಕೆ ಹೋಗಿದ್ದಾಗ ಇವನಿಗೆ ಸಮಾನ ಮನೋಧರ್ಮ ಹೊಂದಿದ್ದ ಆಸ್ಕರ್ ವೈಲ್ಡ್ ಮತ್ತು ಆಲ್ಫ್ರೆಡ್ ಡಗ್ಲಾಸ್‍ರ ಪರಿಚಯವಾಯಿತು. ಪ್ಯಾರಿಸ್‍ನ ಕೃತಕ ನಾಗರಿಕ ಜೀವನದ ಬಗೆಗೆ ತನಗಿದ್ದ ತಿರಸ್ಕಾರವನ್ನು ವ್ಯಂಗ್ಯ, ವಿಡಂಬನೆಗಳ ಮೂಲಕ ಪಲ್ಯೂಡ್ಸ್ (1895) ಕೃತಿಯಲ್ಲಿ ಅಭಿವ್ಯಕ್ತಿಸಿದ್ದಾನೆ. ಇವನ ಲಾ ಇಮ್ಮಾರಲಿಸ್ಟ್ ಕಾದಂಬರಿ (1902) ನೀತಿಯನ್ನು ಕುರಿತಂತೆ ಇವನ ವಿಚಾರಗಳ ಮೇಲೆ ಬೆಳಕು ಚೆಲ್ಲುತ್ತದೆ. ಆದರೆ ಲಾ ಪೋರ್ಡೆ ಎ ಟ್ರಾಯೆಟ್ (1909) ಎಂಬ ಕಾದಂಬರಿ ಇವನ ಧಾರ್ಮಿಕ ಹಂಬಲವನ್ನು ತಿಳಿಸುತ್ತದೆ. ಲೆಸ್‍ಕೇವ್ಸ್ ದು ವಾಟಿಕನ್ (1914) ಎಂಬ ಈತನ ಕಾದಂಬರಿ ಕ್ಯಾಥೋಲಿಕರ ಪ್ರತಿಭಟನೆಗೆ ಗುರಿಯಾಗಿ ಅಶ್ಲೀಲ, ಅಸಭ್ಯ ಎಂಬ ಟೀಕೆಗಳಿಗೆ ಗುರಿಯಾಯಿತು. ಸಾಲ್ (1928) ಎಂಬ ಕೃತಿ, ಭೋಗವೇ ಬಾಳಿನ ಪರಮಸತ್ಯ ಎಂದು ಸಾರಿದ ಇವನ ಧೋರಣೆಯನ್ನೇ ಬದಲಾಯಿಸಿಕೊಂಡು ಅದಕ್ಕೆ ಪ್ರತಿವಾದವಾಗಿ ಬರೆದಿರುವಂತಿದೆ. ಇದಕ್ಕೆ ಮುಖ್ಯಕಾರಣ ತಾಯಿಯ ನಿಧನದಿಂದ ಇವನ ಜೀವನವನ್ನಾವರಿಸಿದ ಶೋಕ ಹಾಗೂ ಬದುಕಿನ ಅರ್ಥಶೂನ್ಯತೆಗಳು.

	ನಮ್‍ಕ್ವಿಡ್ ಎಟ್ ಟು (1926) ಕೃತಿಯಲ್ಲಿ ಯೇಸುವಿನೊಡನೆ ನಡೆಸಿದ ಮಾತುಕತೆಗಳ ಕಲ್ಪನೆಗೆ ಸೃಜನಾತ್ಮಕ ರೂಪ ನೀಡಲಾಗಿದೆ. ಒಂದನೆಯ ಮಹಾಯುದ್ಧದ ಕಾಲದಲ್ಲಿ, ಇವನ ಮನಃಸತ್ತ್ವದಲ್ಲುಂಟಾದ ಬದಲಾವಣೆಯ ಕಾಲದಲ್ಲಿ ಬರೆದ ಕೃತಿ ಇದಾಗಿದೆ. ಶ್ರದ್ಧೆ-ವಿಶ್ವಾಸಗಳ ಅನ್ವೇಷಣೆ ಹಾಗೂ ಅವುಗಳನ್ನು ಪಡೆಯಬೇಕೆಂಬ ಹಂಬಲ, ವ್ಯಾಕುಲತೆಗಳು ಈ ಕೃತಿಯ ಉದ್ದಕ್ಕೂ ಕಾಣಬರುತ್ತವೆ.

	ಮೊದಲೇ ಹೇಳಿದಂತೆ ಧಾರ್ಮಿಕ ವಾತಾವರಣದಲ್ಲಿ ಬೆಳೆದ ಈತನ ಮನಸ್ಸಿನಲ್ಲಿ ಜೀವನದುದ್ದಕ್ಕೂ ನಿರ್ಬಂಧವನ್ನು ನಿರ್ದಾಕ್ಷಿಣ್ಯವಾಗಿ ನಿರಾಕರಿಸಿ, ತನ್ನೊಳಗೇ ಮನಸ್ಸಿನಲ್ಲಿ ಕೊರೆಯುತ್ತಿದ್ದ ತಪ್ಪಿತಸ್ಥ ಮನೋಭಾವವನ್ನು ಆಮೂಲಾಗ್ರವಾಗಿ ಕಿತ್ತುಹಾಕಿ, ತನ್ನದೇ ಆದ ಒಂದು ಹೊಸ ನೀತಿ ಸಂಹಿತೆಯನ್ನು ರೂಪಿಸಿಕೊಂಡ. ಜೀವನವನ್ನು ನೈತಿಕತೆಯಿಂದ ನೋಡುವುದನ್ನು ಈತ ಒಪ್ಪುವುದಿಲ್ಲ. ಜೀವನಕ್ಕೆ ನೀತಿ, ಅನೀತಿಗಳನ್ನು ಅನ್ವಯಿಸಬಾರದೆಂದೂ ಅದು ಈ ಎರಡಕ್ಕೂ ಅತೀತವಾಗಿರಬೇಕೆಂಬುದೂ ಇವನ ವಾದ. ಇವನ ಸಿದ್ಧಾಂತವನ್ನು ನೇತ್ಯಾತ್ಮಕ ಎಂದು ಕರೆದಿದ್ದಾರೆ. ಬದುಕಿಗೆ ಅತ್ಯಂತ ಮುಖ್ಯವಾದುದು ಭಾವಶುದ್ಧಿ ಮತ್ತು ಸಾಚಾತನ ಎಂಬುದು ಇದರರ್ಥ. ಸಾಮಾಜಿಕ ರೂಢಿಯ ನೀತಿ ಪದ್ಧತಿಯ ಒತ್ತಡದಿಂದ ಸಮಾಜವನ್ನು ಮುಕ್ತಗೊಳಿ ಸುವ ಹೋರಾಟದಲ್ಲೇ ಈತನ ಜೀವನ ಕಳೆಯಿತು. ಅಂತರಂಗದ ತುಮುಲ, ಬಾಂಧವ್ಯಗಳಲ್ಲಿ ಘರ್ಷಣೆ, ಜನಾಪವಾದ, ದಾಂಪತ್ಯದಲ್ಲಿ ವಿರಸ-ಈ ಒಂದನ್ನೂ ಗಣಿಸದೆ, ಎಲ್ಲವನ್ನೂ ಸಹಿಸಿಕೊಂಡು, ತನ್ನ ನಂಬಿಕೆಗಳಿಗೆ ಮಾತ್ರ ನಿಷ್ಠನಾಗಿ ಪ್ರಾಮಾಣಿಕನಾಗಿ ಸಾಹಿತ್ಯರಚನೆ ಮಾಡುತ್ತ ಕೊನೆಯವರೆಗೂ ಕಲಾನಿಷ್ಠನಾಗಿ ಈತ ಉಳಿದ. ದಲಿತರ, ಬಹಿಷ್ಕøತರ, ಶೋಷಿತರ, ಸ್ತ್ರೀಯರ ಮತ್ತು ಸಾಮ್ರಾಜ್ಯಶಾಹಿಯ ತುಳಿತಕ್ಕೆ ಸಿಕ್ಕವರ ಪರವಾಗಿ ಸಮಾನತೆ, ಸಾಮಾಜಿಕ ನ್ಯಾಯಗಳಿಗಾಗಿ ನಿರಂತರವಾಗಿ ಹೋರಾಡಿದ.
	ಲೆಸ್ ಫಾಜ್ ಮೊನ್ನಾಯೂರ್ಸ್ (1925)-ಇದನ್ನು ತನ್ನ ಅತ್ಯುತ್ತಮ ಕಾದಂಬರಿ ಎಂದು ಇವನೇ ಹೇಳಿಕೊಂಡಿದ್ದಾನೆ. ರಚನೆಯ ದೃಷ್ಟಿಯಿಂದ ಈ ಕೃತಿಯ ತಂತ್ರ ವಿಶಿಷ್ಟವಾದದ್ದು. ಇದು ಇವನ ಹೊಸ ಪ್ರಯೋಗ.

	ಕಾರಿಡಾನ್ (1924) ಸಲಿಂಗಕಾಮವನ್ನು ಸಮರ್ಥಿಸುವ ಕೃತಿಯಾ ಗಿದ್ದು ಇವನ ಮಿತ್ರರಿಂದಲೇ ಟೀಕೆ, ವಿರೋಧಗಳಿಗೆ ಗುರಿಯಾಯಿತು.

	ಈತನ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ ನಾವೆಲ್ ರಿವ್ಯೂಫ್ರಾಂಕೇ ಎಂಬ ಸಾಹಿತ್ಯ ಪತ್ರಿಕೆ ಪ್ರಪಂಚದ ಎರಡು ಮಹಾಯುದ್ಧಗಳ ನಡುವಿನ ಅವಧಿಯಲ್ಲಿ ಫ್ರಾನ್ಸಿನ ಅಗ್ರಮಾನ್ಯ ಸಾಹಿತ್ಯ ಪತ್ರಿಕೆ ಎನಿಸಿತ್ತು. ಇದರ ಮೂಲಕ ಹಲವಾರು ಉದಯೋನ್ಮುಖ ಬರೆಹಗಾರರನ್ನು ಗುರುತಿಸಿ ಬೆಳಕಿಗೆ ತಂದ ಶ್ರೇಯಸ್ಸು ಇವನದು.

	ವಾಯೇಜ್ ಆ ಕಾಂಗೊ (1927), ರಿಟೂರ್ ದು ಟೆಹಾಡ್ (1928) ಎಂಬ ಕೃತಿಗಳು ವಸಾಹತುಶಾಹಿಯನ್ನು ತೀವ್ರವಾಗಿ ಖಂಡಿಸಿವೆ. ಲಇಕೋಲ್ ಡೆಸ್ ಫೆಮ್ಮಿ  ಕಾದಂಬರಿ (1929) ಮಹಿಳೆ, ಮದುವೆ, ಮನೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕುರಿತಿದೆ. ಸಿ ಲೆ ಗ್ರೇನ್ ನೆ ಮ್ಯೂರ್ಟ್ ಎಂಬ ಕೃತಿ ಈತ ಮದುವೆಯಾಗುವವರೆಗಿನ ಆತ್ಮಚರಿತ್ರೆಯ ನ್ನೊಳಗೊಂಡಿತ್ತು. 1938ರಲ್ಲಿ ಈತನ ಪತ್ನಿ ನಿಧನಳಾದಾಗ ಉಂಟಾದ ದುಃಖದಿಂದ ಮದುವೆಯ ಅನಂತರದ ಆತ್ಮಚರಿತ್ರೆಯನ್ನು ಬರೆದು ಆ ಕೃತಿಯ ಮುಂದಿನ ಭಾಗವಾಗಿಸಿದ. ಈ ಕೃತಿ ಇವನ ಎಲ್ಲ ಕೃತಿಗಳಿಗಿಂತ ಅತ್ಯುತ್ತಮ ಎಂದು ಪರಿಗಣಿತವಾಗಿದೆ.

	ಥೀಸೀ ಇವನ ಕೊನೆಯ ಮಹದ್ಗ್ರಂಥ. ಆಕ್ಸ್‍ಫರ್ಡ್ ವಿಶ್ವವಿದ್ಯಾಲಯ ಇವನಿಗೆ ಗೌರವ ಡಾಕ್ಟೊರೇಟ್ ಪ್ರಶಸ್ತಿ ನೀಡಿ ಗೌರವಿಸಿದೆ. 1947ರಲ್ಲಿ ಇವನಿಗೆ ನೊಬೆಲ್ ಪ್ರಶಸ್ತಿ ದೊರೆಯಿತು.

	ಫಿಲೋಕ್ವಿಟೆ (1899), ಲೆ ರಾಯ್ ಕ್ಯಾಂಡಾಲೆ (1901), ಕಿಂಗ್ ಕ್ಯಾಂಡಾಲೀಸ್, ಈಡಿಪೆ (1931), ಲೆ ರಿಟೂರ್ (1946)-ಇವು ಈತನ ನಾಟಕ ಕೃತಿಗಳು. ಪೊಯೆಟಿಕ್ ಎಂಬುದು ಕಾವ್ಯ ಸಿದ್ಧಾಂತವನ್ನು ಕುರಿತ ವಿಮರ್ಶನ ಗ್ರಂಥ. ಆಯಿನ್ಸಿ ನೊಯಿಚ್ ಇಲ್ ಲೆ ಜ್ಯುಸ್ ಎಂಬ ಚಿಂತನೋಕ್ತಿಗಳ ಸಂಗ್ರಹ, ಪತ್ರಗಳ ಸಂಗ್ರಹಗಳೂ ಪ್ರಕಟಗೊಂಡಿವೆ.

	ಇವನು 1951ರಲ್ಲಿ ನಿಧನನಾದ. ಕುವರ್‍ವಿಲೆ ರುದ್ರಭೂಮಿಯಲ್ಲಿ ಪತ್ನಿಯ ಸಮಾಧಿಯ ಪಕ್ಕದಲ್ಲಿಯೇ ಈತನನ್ನೂ ಸಮಾಧಿ ಮಾಡಲಾಯಿತು. ಸಮಗ್ರ ಯುರೋಪಿನಲ್ಲಿಯೇ ಆ ಕಾಲದ ಅತ್ಯಂತ ಶ್ರೇಷ್ಠಸಾಹಿತಿ ಎಂಬ ಮನ್ನಣೆಗೆ ಪಾತ್ರನಾದವನು ಈತ. ಅಶ್ಲೀಲ ವಿಷಯಗಳಿಂದ ಹಿಡಿದು ಉನ್ನತ ಕಲಾಯೋಗದವರೆಗೂ ಕೃತಿಗಳನ್ನು ರಚಿಸಿದವನು. ಪ್ರಕ್ಷುಬ್ಧಗೊಳಿಸುವ ವಿಚಾರಗಳನ್ನು ವಿವೇಚನೆಗೆ ತೆಗೆದುಕೊಂಡು ಹೊಸ ರೀತಿಯ ಆಲೋಚನೆಗೆ ಪ್ರಚೋದನೆ ನೀಡಿದವನು. ಇವನ ಗದ್ಯಶೈಲಿಯ ಸೊಗಸು ಅನನ್ಯವಾದುದು.							
				   (ಕೆ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ